ಈಶ್ವರೀ ಬಳ್ಳಿ
ಅರಿಸ್ಟೊಲೋಕಿಯೆಸಿ ಕುಟುಂಬದ ಒಂದು ಸಸ್ಯ (ಅರಿಸ್ಟೊಲೋಕಿಯ ಇಂಡಿಕ).  ಇದರ ಹೂಗಳು ಬಾತಿನ ಆಕಾರವಾಗಿರುವುದರಿಂದ ಅವಕ್ಕೆ ಪೆಲಿಕನ್ ಹೂಗಳೆಂದೂ ಹೆಸರು.  ಕಾಯಿ ತೂಗುಬಿಟ್ಟ ಹೂವಿನ ಬುಟ್ಟಿಯಂತಿರುವುದು ಒಂದು ವೈಶಿಷ್ಟ್ಯ.  ಕಾಯಿ ಒಣಗಿ ಬಿರಿದಾಗ ಮತ್ತು ಗಾಳಿಯಲ್ಲಿ ಅತ್ತಿಂದಿತ್ತ ತೂಗಾಡಿದಾಗ ಬೀಜಗಳು ಸ್ವಲ್ಪಸ್ವಲ್ಪವಾಗಿ ಹೊರಬರುವುವು.  ಇದರ ಹೂಗಳಲ್ಲಿ ಪರಾಗಸ್ಪರ್ಶಕ್ರಿಯೆಯೆ ಒಂದು ವಿಶೇಷ ರೀತಿಯದು.  ಹೂಗಳ ಅಂಡಕೋಶ ಮೊದಲು ಪಕ್ವವಾಗುತ್ತದೆ. ಹೂವಿನ ಪುಷ್ಪಾವರಣ ವಿಚಿತ್ರ ಆಕಾರವುಳ್ಳದ್ದಾಗಿದ್ದು ಕೆಳಭಾಗದಲ್ಲಿ ಬುರುಡೆಯಂತೆ ಉಬ್ಬಿಯೂ ಮಧ್ಯದಲ್ಲಿ ಕಿರಿದಾಗಿ ಸೂಕ್ಷ್ಮ ಕೊಳವೆಯಾಕಾರವಾಗಿಯೂ ಮೇಲ್ಭಾಗದಲ್ಲಿ ಓರೆಯಾಗಿಯೂ ಪಸರಿಸಿ ಎಲೆಯಂತೆ ಹರಡಿಕೊಂಡಿರುತ್ತದೆ.  ಕೊಳವೆಯೊಳಗೆ ಕೆಳಮುಖವಾಗಿ ಕೂದಲುಗಳು ಜೋತು ಬಿದ್ದಿರುತ್ತವೆ.  ಸಣ್ಣ ಕೀಟಾದಿಗಳು ಕೊಳವೆಯೊಳಗೆ ಸುಲಭವಾಗಿ ಹೋಗಿ ಮುಂದೆ ಪುಷ್ಪಾವರಣದ ಕೆಳಬುರುಡೆಯನ್ನು ಸೇರುತ್ತವೆ. ಆದರೆ ಒಮ್ಮೆ ಒಳಹೊಕ್ಕ ಕೀಟಾದಿಗಳು ಹೊರಗೆ ಬರದಂತೆ ರೋಮಗಳು ತಾತ್ಕಾಲಿಕ ತಡೆಯುಂಟುಮಾಡುತ್ತವೆ.  ಬುರುಡೆಯಲ್ಲಿ ಕ್ರಮೇಣ ಪರಾಗಕೋಶ ಮಾಗಿ ಪರಾಗ ರೇಣುಗಳು ಹೊರಬಂದು ಮಧ್ಯಕೊಳವೆಯಲ್ಲಿರುವ ರೋಮಗಳೆಲ್ಲ ಒಣಗಿ ಉದುರಿ ಹೊರಬರಲು ಮಾರ್ಗವುಂಟಾದಾಗಲೇ ಪರಾಗರೇಣುವನ್ನು ಹೊತ್ತ ಕೀಟಾದಿಗಳು ಹೊರಬರಬಲ್ಲವು.  ಈ ಕೀಟಾದಿಗಳು ಮುಂದೆ ಇನ್ನೊಂದು ಎಳೆಯ ಹೂವನ್ನು ಸಂದರ್ಶಿಸಿದಾಗ, ಅವು ಕೊಳವೆಯ ಮೂಲಕ ಬುರುಡೆಯನ್ನು ಸೇರುತ್ತವೆಯಲ್ಲದೆ ಆ ವೇಳೆಗೆ ಮಾಗಿ ನಿಂತಿರುವ ಶಲಾಕಾಗ್ರದ ಮೇಲೆ ಪರಾಗರೇಣುಗಳನ್ನಿಟ್ಟು, ಪರಾಗಸ್ಪರ್ಶ ಕ್ರಿಯೆಯನ್ನು ಉಂಟುಮಾಡುತ್ತವೆ. ಆದರೆ ಈ ಸನ್ನಿವೇಶದಲ್ಲಿ ಕೀಟಾದಿಗಳೇ ಬುರುಡೆಯಲ್ಲಿ ತಾತ್ಕಾಲಿಕವಾಗಿ ಸಿಕ್ಕಿಬಿದ್ದು, ಮತ್ತೊಮ್ಮೆ ಪರಾಗಕೋಶಗಳು ಬಲಿಯುವುದನ್ನೇ ಕಾಯುತ್ತಿದ್ದು ಕೊಳವೆಯ ಮುಖಾಂತರ ಹೊರಬರಲಾರದೆ ಅಸಹಾಯಕ ಸ್ಥಿತಿಯಲ್ಲಿ ಇರುತ್ತದೆ.  ಪರಾಗಸ್ಪರ್ಶ ಕ್ರಿಯೆ ಮುಗಿದ ಮೇಲೆ ಹೂವಿನೊಳಗೆ ಮಧುಸಂಗ್ರಹ ನಿಲ್ಲುವುದರಿಂದಲೂ ಪುಷ್ಪಾವರಣದ ತುದಿ ಕೆಳಮುಖವಾಗಿ ಜೋತುಬಿದ್ದು ಕೊಳವೆಯ ಬಾಯಿಗೆ ಮುಚ್ಚಳದಂತೆ ಅಂಟಿಕೊಳ್ಳುವುದರಿಂದಲೂ ಇತರ ಕೀಟಾದಿಗಳು ಒಳಹೋಗಲಾಗುವುದಿಲ್ಲ.  ಮತ್ತೊಮ್ಮೆ ಪರಾಗಕೋಶ ಬಿರಿದು ಪರಾಗರೇಣು ಹೊರಬಂದು ರೋಮಗಳೆಲ್ಲ ಉದುರಿದ ಮೇಲೆಯೇ ಕೀಟಾದಿಗಳು ಪರಾಗರೇಣುಗಳನ್ನು ಹೊತ್ತು ಕೊಳವೆಯ ಮೂಲಕ ಹೊರಬರಬಲ್ಲವು. ಹೀಗೆ ಪರಾಗಸ್ಪರ್ಶಕ್ರಿಯೆಯಾಗಿ ಕೀಟಾದಿಗಳನ್ನು ಆಕರ್ಷಿಸುವ ವಿಧಾನಕ್ಕೆ ಗುಂಡಿಯಲ್ಲಿ ಬೀಳಿಸುವ ವ್ಯವಸ್ಥೆ (ಪಿಟ್‍ಫಾಲ್ ಮೆಕ್ಯಾನಿಸಂ) ಎನ್ನುತ್ತಾರೆ.  (ನೋಡಿ— ಈಶ್ವರೀ-ಕುಟುಂಬದ-ಸಸ್ಯಗಳು)              
       
(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ